ಮೋರೇಸ್, ಫ್ರ್ಯಾಂಕ್ ರಾಬರ್ಟ್
1907 - 74. ಪ್ರಸಿದ್ಧ ಪತ್ರಿಕೋದ್ಯಮಿ. ಸ್ವಾತಂತ್ರ್ಯ ಪೂರ್ವ ಮತ್ತು ಅನಂತರ ಭಾರತೀಯ ಪತ್ರಿಕಾ ಲೋಕದಲ್ಲಿ ಅಂಕಣಕಾರರಾಗಿ, ವರದಿಗಾರರಾಗಿ ಮತ್ತು ಸಂಪಾದಕರಾಗಿ ಪ್ರಸಿದ್ಧರಾದವರು. ಇವರ ಜನನ 1907ರ ನವೆಂಬರ್ 12ರಂದು. ತಂದೆತಾಯಿಗಳಿಬ್ಬರೂ ಗೋವನ್ನರು. ಧರ್ಮನಿಷ್ಠ ಕ್ಯಾಥೊಲಿಕ್ ಕ್ರೈಸ್ತರು. ತಂದೆ ಸಿವಿಲ್ ಎಂಜಿನಿಯರ್ ಸರ್ಕಾರಿ ನೌಕರಿಯಾದ ಕಾರಣ ಊರಿಂದೂರಿಗೆ ವರ್ಗಾವಣೆ. ತಂದೆ ಉತ್ತಮ ಬೇಟೆಗಾರರಾಗಿದ್ದು ಅವರೊಂದಿಗೆ ತಾಯಿಯೂ ಜೊತೆಗೂಡುತ್ತಿದ್ದರಂತೆ. ಇದರಿಂದಾಗಿ ಪೋಷಕರೊಡನೆ ಇವರ ಒಡನಾಟ ಕಡಿಮೆಯಿದ್ದಿತೆಂದು ತಿಳಿದುಬರುತ್ತದೆ. ತಾಯಿಯಿಂದ ಫ್ರ್ಯಾಂಕ್ ಮೋರೇಸರಿಗೆ ಬಂದ ಬಳುವಳಿ ಎಂದರೆ ಆಗಿನ ಕಾಲದ ಖ್ಯಾತ ಬರೆಹಗಾರರ ಕೃತಿಗಳ ಅಧ್ಯಯನ. ತಾಯಿ ಸಂಗೀತದಲ್ಲಿ, ಇತರ ಲಲಿತಕಲೆಗಳಲ್ಲಿ ನೈಪುಣ್ಯತೆ ಪಡೆದಿದ್ದರು; ಅವರು ತಮ್ಮ 52ನೆಯ ವಯಸ್ಸಿನಲ್ಲಿ ತೀರಿಕೊಂಡರು.

	1912 - 13ರಲ್ಲಿ ಮೋರೇಸರ ತಂದೆ ಉದ್ಯೋಗ ನಿಮಿತ್ತ ಧಾರವಾಡದಲ್ಲಿ ಇದ್ದರು. ಇಲ್ಲಿಯೇ ಇವರಿಗೆ ನರ್ಸರಿ ಶಿಕ್ಷಣ ದೊರೆತಿದ್ದು. ಇವರಿಗೆ ನಿಯತಕಾಲಿಕೆಗಳ ಮತ್ತು ವ್ಯಂಗ್ಯಚಿತ್ರಗಳ ಬಗ್ಗೆ ಹೆಚ್ಚು ಆಸಕ್ತಿ. ಬಿಜಾಪುರದಲ್ಲಿಯೂ ಒಂದಿಷ್ಟು ದಿನ ಇದ್ದಾಗ ಅಲ್ಲಿಯ ಕ್ಲಬ್ಬಿನಲ್ಲಿ ಇದ್ದ ಗ್ರಂಥಾಲಯವನ್ನು ಉಪಯೋಗಿಸಿಕೊಳ್ಳುತ್ತಿದ್ದರು.

	ಒಂದನೆಯ ಮಹಾಯುದ್ಧ ಆರಂಭವಾದಾಗ ಮೋರೇಸರಿಗೆ ಏಳು ವರ್ಷ. ತಂದೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಯುದ್ಧವರದಿಗಳನ್ನು ಓದಿ ತಿಳಿಸುತ್ತಿದ್ದರು. ಹೀಗೆ ಪತ್ರಿಕೆಗಳ ಮತ್ತು ನಿಯತಕಾಲಿಕೆಗಳತ್ತ ಇವರ ಒಲವು ಮೂಡಿತು. ಮುಂದೆ ತಂದೆಗೆ ಪುಣೆಗೆ ವರ್ಗವಾದಾಗ ಅನಂತರದ ವಿದ್ಯಾಭ್ಯಾಸ ಅಲ್ಲಿಯೇ ಸಾಗಿತು. ಕ್ರಿಕೆಟ್ ಮತ್ತು ಹಾಕಿ ಕ್ರೀಡೆಗಳಲ್ಲಿ ಆಸಕ್ತಿ ಮೊಳೆಯಿತು. ಕಾಲೇಜು ಶಿಕ್ಷಣ ಮುಂಬಯಿಯ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ. ಇತಿಹಾಸ ಮತ್ತು ಅರ್ಥಶಾಸ್ತ್ರ ಅಧ್ಯಯನ ಮಾಡಿ ಬಿ. ಎ. ಪದವಿ ಪಡೆದರು. ಮೋರೇಸ್ 1927ರ ಅಕ್ಟೋಬರ್‍ನಲ್ಲಿ 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ಹೊರಟರು. ಆಕ್ಸ್‍ಫರ್ಡ್‍ನ ಸೇಂಟ್ ಕ್ಯಾಥರೀನ್ ಕಾಲೇಜಿನಲ್ಲಿ ಇತಿಹಾಸಶಾಸ್ತ್ರ ಅಧ್ಯಯನ ಮಾಡಿದರು. ಲಂಡನ್‍ನಲ್ಲಿ ಬ್ಯಾರಿಸ್ಟರ್ ಪದವಿ ಪಡೆದರು. ಜನರನ್ನು, ದೇಶಗಳನ್ನು ಅರಿಯಲು ಯೂರೋಪಿನಾದ್ಯಂತ ಪ್ರವಾಸ ಮಾಡಿದರು. ಫ್ರ್ಯಾಂಕ್ ಮೋರೇಸರ ಸ್ನೇಹಿತರ ಬಳಗದಲ್ಲಿ ಪ್ರಸಿದ್ಧ ಸಮಾಜ ಕಾರ್ಯಕರ್ತ ರೆವರೆಂಡ್ ವೆರಿಯರ್ ಎಲ್ವಿನ್, ಹುಮಾಯೂನ್ ಕಬೀರ್ ಮಹಮದ್ ಅಲಿ ಜಿನ್ನಾ, ಎಚ್. ಜಿ. ವೇಲ್ಸ್, ಬಟ್ರ್ರಾಂಡ್ ರಸಲ್, ಬರ್ನಾರ್ಡ್ ಷಾ, ಜಿ. ಕೆ. ಚೆಸ್ಟರ್‍ಟನ್, ರವೀಂದ್ರನಾಥ ಠಾಗೂರ್, ಸರ್ವಪಲ್ಲಿ ರಾಧಾಕೃಷ್ಣನ್, ಸರೋಜಿನಿ ನಾಯ್ಡು - ಮುಂತಾದವರು ಇದ್ದರು. ಸ್ವಲ್ಪ ಕಾಲ ಮೋರೇಸರು ಭಾರತಿ ಎಂಬ ಪತ್ರಿಕೆಯನ್ನು ಆರಂಭಿಸಿದರು. ಕಾರ್ಲಮಾಕ್ರ್ಸ್ ಮತ್ತು ಮಹಾತ್ಮ ಗಾಂಧಿ ಅವರ ಸಿದ್ಧಾಂತಗಳು ಪ್ರಭಾವ ಬೀರಿದರೂ ಸಮತಾವಾದ ಇವರಿಗೆ ಮೆಚ್ಚುಗೆಯಾಗಲಿಲ್ಲ.

	ಮೋರೇಸರು 1934ರಲ್ಲಿ ಭಾರತಕ್ಕೆ ಹಿಂದಿರುಗಿದರು. ಮುಂಬಯಿಯಲ್ಲಿ ಜಂಷಡ್ ಕಾಂಗಾ ಅವರ ಬಳಿ ಸಹಾಯಕರಾಗಿ ವಕೀಲಿ ವೃತ್ತಿ ಆರಂಭಿಸಿದರು. ಸ್ವಲ್ಪ ಕಾಲದಲ್ಲಿಯೇ ವಕೀಲಿ ವೃತ್ತಿ ತಮಗಲ್ಲ ಎನ್ನುವುದು ಇವರ ಅರಿವಿಗೆ ಬಂತು. ಟೈಮ್ಸ್ ಆಫ್ ಇಂಡಿಯಾದ ಸೋದರ ಪತ್ರಿಕೆ ಈವನಿಂಗ್ ನ್ಯೂಸ್‍ನ ಸಂಪಾದಕರು `ಕಾನೂನು ಮತ್ತು ಸಾಮಾನ್ಯ ಪ್ರಜೆ ಎಂಬ ವಿಷಯ ಕುರಿತಂತೆ ಲೇಖನ ಸರಣಿಯೊಂದನ್ನು ಬರೆಯಲು ಕೋರಿದಾಗ ಮೋರೇಸರಿಗೆ ಅಪರಿಮಿತ ಸಂತೋಷವಾಯಿತು. ಹೀಗೆ ಅಂಕಣಕಾರರಾಗಿ ಇವರ ಪತ್ರಿಕೋದ್ಯಮ ಆರಂಭಗೊಂಡಿತು. ಇವರ ಬರೆವಣಿಗೆಯ ಹೊಸ ಶೈಲಿ, ಶಬ್ದಗಳಲ್ಲಿಯ ನಯಗಾರಿಕೆ ಮತ್ತು ಹಿನ್ನೆಲೆಯಲ್ಲಿದ್ದ ಪಾಂಡಿತ್ಯ ಓದುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದವು. ಮುಂದೆ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ಪತ್ರಿಕೆಯಲ್ಲಿ ಲೇಖನಗಳು ಪ್ರಕಟವಾಗತೊಡಗಿದವು. ಜವಾಹರಲಾಲ್ ನೆಹರೂ, ಮಹಮದ್ ಅಲಿ ಜಿನ್ನಾ, ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರಬೋಸ್, ಎಂ. ಎನ್. ರಾಯ್, ಸಾವರ್ಕರ್, ಮಾವೋ ತ್ಸೆ ಡುಂಗ್ ಮುಂತಾದ ಖ್ಯಾತನಾಮರೊಡನೆ ಮಾಡಿದ ಸಂದರ್ಶನಗಳನ್ನು ಮೋರೆಸ್ ತಮ್ಮ ಹೊಸ, ವಿಶಿಷ್ಟ ಶೈಲಿಯಲ್ಲಿ ರೂಪಿಸಿ ಪ್ರಕಟಿಸಿದಾಗ ಸಹಜವಾಗಿಯೇ ಅದು ಜನಮನ್ನಣೆ ಪಡೆಯಿತು. ಸಮಕಾಲೀನರನ್ನು ಸಾಹಿತ್ಯದ ಪಾತ್ರಗಳೊಂದಿಗೆ ಹೋಲಿಸಿ ವಿಶ್ಲೇಷಿಸುವುದರಲ್ಲಿ ಮೋರೇಸರದ್ದು ಎತ್ತಿದ ಕೈ. ಜವಾಹರಲಾಲ್ ನೆಹರೂ ಅವರನ್ನು ಹ್ಯಾಮ್ಲೆಟ್ ಪಾತ್ರಕ್ಕೆ ಹೋಲಿಸಿದ್ದು, ಮಹಾತ್ಮ ಗಾಂಧಿಯವರನ್ನು ರಾಜಕಾರಣಿ ಅಲ್ಲ, ಮಾನವತಾವಾದಿ ಎಂದದ್ದು ಇವರ ಬರೆಹಗಳ ಹಿಂದಿದ್ದ ವಿಶ್ಲೇಷಕ ಮನೋಧರ್ಮಕ್ಕೆ ಹಿಡಿದ ಕನ್ನಡಿ.

	ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಬ್ರಿಟಿಷರ ಮಾಲೀಕತ್ವದಲ್ಲಿದ್ದ ಕಾಲದಲ್ಲಿ (1938-46) ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಈ ನಡುವೆ ಇವರನ್ನು ಬರ್ಮಾ ಮತ್ತು ಚೀನ ದೇಶಗಳಿಗೆ ಯುದ್ಧ ವರದಿಗಾರರನ್ನಾಗಿ ಕಳುಹಿಸಲಾಯಿತು. ಈ ಅನುಭವ ಇವರಲ್ಲಿ ಧರ್ಮ, ಮಾನವೀಯತೆ ಮತ್ತು ನೈತಿಕತೆಗಳನ್ನು ಕುರಿತಂತೆ ಇದ್ದ ಅಭಿಪ್ರಾಯವನ್ನು ಬದಲಿಸಿತು. ಅತ್ಯಂತ ವಸ್ತುನಿಷ್ಠ ಯುದ್ಧ ವರದಿಗಾಗಿ ಇವರನ್ನು ಪ್ರಶಂಸಿಸಲಾಯಿತು. ಬರ್ಮ ಯುದ್ಧದ ಸಮಯದಲ್ಲಿ ಬ್ರಿಟಿಷ್ ಸೇನಾನಾಯಕ ಲಾರ್ಡ್ ಮೌಂಟ್ ಬೇಟನ್ ಅವರೊಂದಿಗೆ ನಡೆಸಿದ ಸಂದರ್ಶನ ಹೆಚ್ಚು ಜನರನ್ನು ಆಕರ್ಷಿಸಿತು. 1944ರಲ್ಲಿ ಮೋರೇಸ್ ಚಿಯಾಂಗ್ ಕೈಷೇಕ್ ಅವರನ್ನು ಸಂದರ್ಶಿಸಿ ಲೇಖನ ಬರೆದರು. ತಮ್ಮ 65 ರ ಇಳಿ ವಯಸ್ಸಿನಲ್ಲೂ 1972ರ ಭಾರತ - ಪಾಕ್ ಯುದ್ಧದಲ್ಲಿ ವರದಿಗಾರರಾಗಿ ಕೆಲಸ ನಿರ್ವಹಿಸಿದರು.

	1947-49ರಲ್ಲಿ ಫ್ರ್ಯಾಂಕ್ ಮೋರೇಸ್ ಅವರು ಟೈಮ್ಸ್ ಆಫ್ ಸಿಲೋನ್ ಪತ್ರಿಕೆಯ ಸಂಪಾದಕರಾಗಿದ್ದರು., 1949ರಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಉಪಪ್ರಧಾನ ಸಂಪಾದಕರಾದರು. ಪತ್ರಿಕೆ ಭಾರತೀಯ ಆಡಳಿತಕ್ಕೆ ಒಳಪಟ್ಟಾಗ ಅದರ ಮೊದಲ ಭಾರತೀಯ ಸಂಪಾದಕರಾದರು. ಇವರ ಬರೆಹದಲ್ಲಿ ಕಟುಟೀಕೆಯಿದ್ದರೂ ದ್ವೇಷ ಅಥವಾ ಅಸೂಯೆಯ ಛಾಯೆ ಕಂಡುಬರುತ್ತಿರಲಿಲ್ಲ. ವ್ಯಂಗ್ಯ, ವಿಡಂಬನೆಯ ಹೊನಲು ಹರಿಯುತ್ತಿತ್ತು. ಮೋರೇಸರ ನಿರ್ಭೀತ ಬರೆಹ, ಪತ್ರಿಕಾ ಮಾಲೀಕರೊಡನೆಯೇ ಸಂಘರ್ಷಕ್ಕೆ ಇಳಿಸಿತು. ಮೋರೇಸರನ್ನು 1957ರಲ್ಲಿ ಪತ್ರಿಕೆಯಿಂದ ಹೊರದೂಡಲಾಯಿತು. ಅದೇ ವರ್ಷ ಇವರು ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕಾ ಬಳಗವನ್ನು ಸೇರಿದರು. ಎಕ್ಸ್‍ಪ್ರೆಸ್ ಪತ್ರಿಕೆಗೆ ಮುಖ್ಯ ಸಂಪಾದಕರಾಗಿ ನೇಮಿತರಾದರು. ಅದೇ ಹುದ್ದೆಯಲ್ಲಿ 1972ರ ತನಕ ಮುಂದುವರಿದರು. ಈ ಪತ್ರಿಕೆಯಲ್ಲಿ ಆಡಳಿತದ ದೋಷಪೂರ್ಣ ನೀತಿ ಕಾರ್ಯಕ್ರಮಗಳನ್ನು ಕಟುವಾಗಿ ಟೀಕಿಸಲು ಇವರು ಎಂದೂ ಹಿಂಜರಿಯಲಿಲ್ಲ. ಪತ್ರಿಕೆಯ ಪ್ರಸಾರ ಹಲವು ಪಟ್ಟು ಹೆಚ್ಚಿತು.

	ರಾಜನೀತಿಯಲ್ಲಿ, ಜನಜೀವನದಲ್ಲಿ ಮೌಲ್ಯಗಳಿಗಾಗಿ ಹೋರಾಡಿದ ಕೆಲವೇ ಮಂದಿ ಭಾರತೀಯ ಪತ್ರಕರ್ತರಲ್ಲಿ ಮೋರೇಸ್ ಅಗ್ರಗಣ್ಯರು. ಮೋರೇಸರು ಕೆಲವು ಉತ್ತಮ ಗ್ರಂಥಗಳನ್ನೂ ರಚಿಸಿದ್ದಾರೆ. ಇಂಟ್ರೊಡಕ್ಷನ್ ಟು ಇಂಡಿಯಾ, ಸ್ಟೋರಿ ಆಫ್ ಇಂಡಿಯಾ, ರಿಪೋರ್ಟ್ ಆನ್ ಮಾವೋಸ್ ಚೀನ, ಯಾಂಡರ್ ಒನ್ ವಲ್ರ್ಡ್, ಜವಾಹರಲಾಲ್ ನೆಹರೂ, ದಿ ರಿವೋಲ್ಟ್ ಇನ್ ಟಿಬೆಟ್, ಇಂಡಿಯ ಟುಡೆ ಮುಂತಾದವು. ಇವರ ಪುತ್ರ ಡಾಮ್ ಮೋರೇಸ್ ಸಹ ಪತ್ರಕರ್ತ ಹಾಗೂ ಲೇಖಕರು. ಮೋರೇಸರು 1972ರಲ್ಲಿ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯ ಲಂಡನ್ ನಗರದ ವಿಶೇಷ ಬಾತ್ಮೀದಾರ ಹುದ್ದೆ ಸ್ವೀಕರಿಸಿ ಲಂಡನ್ ನಗರಕ್ಕೆ ಹೋದರು. ಅಲ್ಲಿಯೇ 1974ರಲ್ಲಿ ನಿಧನರಾದರು.
										 	 (ಕೆ.ವಿ.ಎನ್.)